Thursday, July 31, 2008

ಕನಸು..?!

ನೀಲಿ ಬಾನಲ್ಲಿ
ಚುಕ್ಕಿ ಚಂದ್ರಮರು ತೇಲಲು
ರವಿ ಜಾರಿದ
ಸಾಗರದ ತಳ ಸೇರಿದ.
ರಂಗು ರಂಗಿನ
ಮೇಘ ಮಾಲೆಯು
ಜೊತೆ ಜಾರಿತು
ಸಾಗರದ ತಳ ಸೇರಿತು.

ಬೆಳ್ಳಿ ಬೆಳಕ ಜೊತೆ
ನಿನ್ನ ನೆನಪು
ಸೇರಿ ಮತ್ತೇರಿತು.
ಹೊಂಗನಸ ಲೋಕದ
ಕದ ತೆರೆಯಿತು.

ಅಲ್ಲಿ ,
ಎಲ್ಲ ಮರೆಸುವಂತೆ
ಎನ್ನ ಕಣ್ಣೆದುರೇ
ಇರುವೆ ನೀನು.

ಪ್ರತಿ ಮುಂಜಾನೆಯಲು
ಮೂಡುವ
ಮಂಜಿನ ಹನಿಗಳ
ಸವಿಯು ಜೊತೆ ಸವಿಯಲು
ಹಕ್ಕಿಗಳೇ ಕೋರುವವು
ಶುಭವ.

ದಿನವಿಡೀ ಹಸಿರ
ಲೋಕದ ಕಾಯಕ
ಎದೆಯ ಒಳಗೆ
ಬಣ್ಣದ ಪುಳಕ.

ಮುಸ್ಸಂಜೆಯಲಿ
ನಿನ್ನ ಮಡಿಲಲಿ ತಲೆಯಿರಿಸಿ
ಎಣಿಸಲು ಸಾಗರದ ಅಲೆಗಳ
ನೋಡಿ
ನಾಚುವವು ನಕ್ಷತ್ರಲೋಕ
ಚಂದಿರ ಸೇರುವನು
ಮೋಡದ ಮರೆಯ..

Tuesday, July 29, 2008

ಮರು ಹುಟ್ಟು

ಮುರಿದು ಹೋಗಿತ್ತು ಅಷ್ಟೇ!?
ಬಿರುಗಾಳಿಯೂ ಬೀಸಿರಲಿಲ್ಲ
ಯಾರ ಕೊಡಲಿಯೇಟೂ ಬಿದ್ದಿರಲಿಲ್ಲ
ಆದರೂ ಮುರಿದು ಹೋಗಿತ್ತು!?

ಆ
ಳ
ದ
ಧ್ವನಿ
ಕೇಳುತ್ತಲೇ ಇತ್ತು.
ಕತ್ತಲೆಯಲ್ಲಿ
ಸು
ರಿ
ಯು
ತ್ತಿ
ರು
ವ
ಈ ಮಳೆ
ಹ
ನಿ
ಯ
ಹಾಗೆ.

ಚಿಗುರಿ
ನಿಂ
ತಿ
ದೆ
ಹತ್ತು ಹಲವು
ಕವಲುಗಳೊಡನೆ.

ಕಣ್ ಎವೆಯಿಕ್ಕದೆ
ಹಾಗೆ ಮೌನವಾಗಿ,
ಹೊಸ ಬೆಳಕಿಗೆ
ಮೊಗ್ಗೊಂದು
ಅರಳುವ ನಿರೀಕ್ಷೆಯಲಿ,
ಹರುಶದ ಒಸರ ಕನಸಿನಲಿ....



Friday, March 21, 2008

ಚಂದಿರನ ರಾತ್ರಿಗಳು....

ಪ್ರತಿದಿನ ಸೂರ್ಯ ಬಾನಿನಿಂದ ಜಾರಿ ಮುಳುಗು ಹಾಕುವ ಸಮಯ, ಬೆಳಕನ್ನು ಕತ್ತಲು ನುಂಗಿ ಹಾಕುವ ಸಮಯ. ಬಾನಿನಲ್ಲಿ ನಕ್ಷತ್ರಗಳು ಮಿನುಗುತ್ತಿದ್ದರೆ, ನನ್ನ ಕಲ್ಪನೆಗಳು, ಪ್ರಶ್ನೆಗಳು ಚುಕ್ಕಿಗಳಾಗಿ ಮನಸ್ಸನ್ನು ಆವರಿಸಿ ಬಿಟ್ಟಿರುತ್ತದೆ. ಚಂದಿರನ ಆ ಮಂದವಾದ ಬೆಳ್ಳಿ ಬೆಳಕು ನನ್ನನ್ನು ನಿಧಾನವಾಗಿ ಅವನತ್ತ ಸೆಳೆಯುತ್ತದೆ. ನನಗೆ ನಾನೇ ತಿಳಿಯದಂತೆ ಚಂದಿರನ ಜೊತೆ ನನ್ನ ಮನಸು ಹರಟ ತೊಡಗುತ್ತದೆ.

ಅಲ್ಲಿ ನನ್ನ ಮುಂದಿರುವ ದಿನಗಳು ಮೆಲ್ಲಮೆಲ್ಲನೆ ರೂಪ ಪಡೆಯುತ್ತದೆ. ಬೆಳದಿಂಗಳ ಲೋಕ ಕವನಗಳಾಗಿ ಮನಸ ತುಂಬೆಲ್ಲಾ ಓಡಾಡುತ್ತದೆ. ಬರೆಯಲು ಕುಳಿತರೆ ಬಲೆ ಇಲ್ಲದೆ ಮೀನನ್ನು ಹಿಡಿಯಲು ಹೊರಟಂತೆ, ನುಣುಚಿ ಹೋಗಿ ನನ್ನನ್ನು ಆಟವಾಡಿಸುತ್ತದೆ. ಸುಸ್ತಾಗಿ ಛೆ! ಅಂದುಕೊಂಡು ಕೃತಕ ಬೆಳಕಿನಡಿಗೆ ಪುಸ್ತಕಗಳಿಗಾಗಿ, ಹರಟೆ ಹೊಡೆಯಲು ಹೊಟ್ಟೆ ತುಂಬಿಸಲು ಹೋಗಿ ಬಿಡುತ್ತೇನೆ.

ಸಂಜೆ ಬಾನಿನಲ್ಲಿ ಮೂಡಿದ ನಕ್ಷತ್ರಗಳು ಸದ್ದಿಲ್ಲದೆ ನನ್ನ ಮನಸಿನಲ್ಲಿ ಕುಳಿತಿರುತ್ತದೆ. ಮತ್ತೆ ಚಂದಿರನ ಜೊತೆ ಮಾತಿಗೆ ಕುಳಿತರೆ ಹೊತ್ತು ಹೋದ್ದದ್ದು ತಿಳಿಯುವುದಿಲ್ಲ. ಬೆಳಕು ಹರಿಯುವ ವರೆಗೂ ನಿದ್ದೆ ಹತ್ತುವುದೇ ಇಲ್ಲ. ಮತ್ತೆ ಸಂಜೆಗಾಗಿ ಮನಸು ಕಾಯುತ್ತಿರುತ್ತದೆ..

Tuesday, February 26, 2008

ಮೌನದಲ್ಲಿ





ಮೌನದಲ್ಲೂ
ನೀನೇಕೆ ಕಾಡುವೆ
ಹೀಗೆ.

ಎದೆಯ ಬಡಿತವೆ
ಮರೆತು
ಹೋಗುವ ಹಾಗೆ.



ಪ್ರತಿ ಉಸಿರಿನಲೂ

ನಿನ್ನದೇ
ನೆನಪು.


ಲೋಕದಲ್ಲಿ

ಬೇರೆ ಏನೂ

ತಿಳಿಯದ ಹಾಗೆ.

ನೀನು ತೊರೆದು

ಹೋದ ಮೇಲೆ

ನೆನಪುಗಳದೇ ಸಂಸಾರ.

ಎಲ್ಲೂ ಹೇಳಲಾರದ

ಮಾತುಗಳು

ಮೌನ ಸಾಮ್ರಾಜ್ಯದಲಿ

ನಿನ್ನನೇ ಹುಡುಕಾಡಿವೆ.
'ಮೌನ' ರಾಗವಾಗಿ
ಎದೆ ತುಂಬಿ ಹರಿದಿದೆ .
ಎಂದೂ ಮಾಸಲಾರದ
ಆ ನೆನಪುಗಳು
ಚಿತ್ರಶಾಲೆಯನೇ
ತೆರೆದಿದೆ.
ಚಿತ್ರಗಳೆಲ್ಲ
ದುಂಬಿಗಳಾಗಿ
ಹೊರಟಿವೆ ...
ಒಡಲೊಳಗೆ ಮೂಡಿದ
ಹೊಂಗನಸುಗಳು
ಬಾನಂಗಳದಲಿ ಹಾರಾಡಿವೆ
ತಾರೆಗಳಾಗಿ.
ನೀನೊಮ್ಮೆ
ನೋಡು
ಈ ಬೆಳದಿಂಗಳಿರುಳಿನ
ಹಾಗೇ
ಮೌನವಾಗಿ .



Saturday, January 26, 2008

ಆಕಾಶ ಮತ್ತು ಕನಸು







..........................ಚಂದಿರೆ ನಗ್ತಾ ಇತ್ತು


ಆದ್ರೂ, ಆ ನಕ್ಷತ್ರ ಮುಗಿಲು ಬಿಟ್ಟು ಹೋದ ಸುಂದರ ನೆನಪುಗಳಲ್ಲಿ ಮುಳುಗೇಳುತ್ತಾ ಚಂದಿರೆಯ ನೋಡ್ತಾ ಹಾಗೇ ಇದೆ. ಹೋದ ಹುದು ಎಂಬ ನೀರೀಕ್ಷೆಯಲ್ಲಿ......



Sunday, January 20, 2008

ಬೆಳ್ಳಿಯ ಹಣ್ಣು


ಸೂರ್ಯ
ಜಾರಿ ಎಷ್ಟೋ
ಹೊತ್ತಾಯಿತು.
ಬಾನಲ್ಲೆಲ್ಲ
ಹತ್ತಿ ಹಾರಾಡುತ್ತಿದೆ
ಕನಸುಗಳು.

ನಾಯಿಗಳ
ಸಂಗೀತ ಸುಧೆಗೆ
ಗೊರಕೆಗಳು
ಸಾತ್ ನೀಡುತ್ತಿವೆ.
ಚುಕ್ಕಿಗಳು
ಬಯಲಲ್ಲಿ ನಿಂತು
ಪಿಳ ಪಿಳ
ನೋಡುತ್ತಿವೆ.

ದೂರದ
ಮರದ ರೆಂಬೆಯೊಂದರಲ್ಲಿ
ಬೆಳ್ಳಿಯ ಹಣ್ಣೊಂದು
ನೇತಾಡುತ್ತಿದೆ.
ನಾಳೆ
ಕರಗುವೆನೆಂಬ
ಆತಂಕ ಅದಕಿದ್ದಂತಿಲ್ಲ.

ನನ್ನ ಹಾಗೆ?!! ....
ನಿನ್ನ ಹಾಗೆ?!!!.........

Saturday, January 5, 2008

ಮೌನ

ಈ ಬೆಳಕು
ಎದೆಯ ಚುಚ್ಚುತ್ತವೆ.
ಗಾಯಗಳು
ಹೊಸ ಹೂವ
ಅರಳಿಸುತ್ತವೆ .
ಹೀಗೆ,
ಒಂದೆರಡು ದಿನ
ಮೌನ
ಉಪಚರಿಸುತ್ತದೆ
ಗಾಯ
ಮಾಸಿ ಹೋಗುವಂತೆ.
ಈಗೀಗ
ಗಾಯಗಳು ಮಾಮೂಲು
ಹಾಗೇ,
ಮೌನವೂ
ಬಲು ಹತ್ತಿರ.