Saturday, August 30, 2008

ಓ ಪ್ರಾಣ ಸಖಿ..



ದೂರದೂರಿನಲಿ
ಹಸಿರ ಮೌನದಲಿ
ಬಾಳ ಹಾದಿ ಕಂಡೆ
ಸುಂದರ ಸುಮಧುರ
ಜೀವನಯಾನಕೆ
ನೀನೇ ಜೊತೆ ನನಗೆಂದೆ.

ಪ್ರೇಮ ಕಾವ್ಯ ಬರೆಯಲು
ನಿನ್ನ ನೋಟ ರಾಗವಾಗಿ
ಎದೆಯ ಮಿಡಿತ ತಾಳವಾಗಿ
ಅಲೆ ಅಲೆಯಾಗಿ ತೇಲಿ ಬಂದು
ಮೌನ ಗೀತೆ ಮಿಡಿಸಿ
ನಡೆವ ಹಾದಿಗೆ ಒಲವ ಮತ್ತೇರಿತು.

ಮನದ ಮಂದಿರದ
ಮಂದಾರ ನೀನು
ಕಂಪ ಮರೆತು ಉಳಿದೆ
ಎದೆಯ ಗುಡಿಯಲ್ಲಿ
ಪ್ರೇಮ ದೀಪವನು ಬೆಳಗಿ
ನೀನೆತ್ತ ನಡೆದೆ.

ಪ್ರೀತಿ ಹಸಿವು
ಹಂಬಲಿಸಿ ಒಡಲಿನಲಿ
ಬಳಲಿ ಬೆಂಡಾಗಿ ಕಾಡಿದೆ
ತುಂಬಿ ನನ್ನೊಳಗೆ
ನಿನ್ನ ತಿಳಿಬಿಂಬ
ಕ್ಷಣವು ಯುಗವಾಗಿ ಕಾಡಿದೆ.

ಮನದ ಮಹಲು
ನನಸಾಗಿ ತಳೆದಿರಲು
ನೀ ಇರದೆ ಈ ಬಾಳ್ವೆಯು
ಮಡಿಲ ತೊಟ್ಟಿಲಲಿ
ಮಗುವು ಉಲಿಯದೆ
ಇದು ಬರಿಯೆ ಚಿತ್ರಪಟವು.

ಉಸಿರ ಮರೆತು ನೀನಿರುವುದೆಂತು
ಕನಸ ಕಳೆದು ನಾನಿರುವುದೆಂತು
ಜೀವ ಸಖಿ ಓ ಪ್ರಾಣ ಸಖಿ
ಕಸುವು ತಂಬಿ
ತುಂ ತುಂಬಿ ತುಂಬಿ ಬಾ
ಎದೆಯ ತಣಿಸೆ
ತುಂ ತುಂಬಿ ತುಂಬಿ ಬಾ
ಜೀವ ಸಖಿ ಓ ಪ್ರಾಣ ಸಖಿ.

ಮನವಿ

ನಡೆವ ಹಾದಿಯಲಿ
ನೀ ಜೊತೆ ಸೇರಲು
ಈ ಬಾಳು ಸುಮಧುರ.
ರೆಪ್ಪೆಯೊಳಗೆ
ನೀ ಮೂಡಿರಲು
ಮಾತೇ ಮರೆತಿಹುದು ನನ್ನಧರ.

ಈ ಎದೆಯು ಹಸಿದಿರಲು
ಪ್ರೀತಿಯ ತುತ್ತನುಣಿಸದೆ
ಮರೆಯಾಗುವೆಯೇತಕೆ
ಓ ಪ್ರೇಮ ದೀಪಿಕೆ.
ಮನವು ನಿನ್ನ
ನೆನಪಿನಲ್ಲೆ
ಕಳೆಯುತಿಹುದು ಕ್ಷಣ ಕ್ಷಣವನು.

ನೀನು ಉಸಿರ ಮರೆತರೆ
ಇರುವನೆಂತು ನಿನ್ನಿನಿಯನು.
ಒಡಲಿನೊಳಗೆ ನೂರು ಕನಸ
ಹೊತ್ತದೆಂತು ಮಲಗಿಹೆ
ಹೀಗೆ ನೀನು ಸುಮ್ಮನೆ.

ಏಕೋ ಕಾಣೆ
ಮನ ಬಯಸಿಹುದು
ನಿನ್ನ ಮಡಿಲನು
ನಮ್ಮ ನಾವೇ ಮರೆವ ಸುಖವನು.

ನಿನ್ನ ಮೌನ
ತೊರೆಯಬಾರದೆ
ಬರುವೆಯೆಂದು ಹೇಳಬಾರದೆ
ನಮ್ಮ ಕನಸ ಮಹಲಿಗೆ.