Monday, May 25, 2009

ಪ್ರೇಮ ಭಿ ಕ್ಷೆ



ಪ್ರೀತಿಸ ಬೇಡ
ಎನ್ನ ತೋಳ ತೆಕ್ಕೆಯಲಿ
ನಿನ್ನ ಮೌನದಲ್ಲಡಗಿಹ
ಕಂಬನಿಗಳ ಸಾಲು ಜಾರಿದರೆ ಸಾಕು.

ನಿನ್ನ ಮೌನದಲ್ಲಡಗಿಹ
ಆ ಅದೃಶ್ಯ ಬಣ್ಣಗಳ
ಚಿತ್ತಾರವ ನೆನಪಿಸಿಕೊಂಡರೆ ಸಾಕು.

ನಿನ್ನ ಮೌನದಲ್ಲಡಗಿಹ
ಬರಿಯೆ ನೀನು ಸಾಕು.

ರೆಕ್ಕೆ ಕಳಚಿ ಒಮ್ಮೆ ಬಾ..

Tuesday, January 20, 2009

ಜೋಗುಳದಿಂದ- 4


ಕಣ್ಣ ನೋಟದಲ್ಲೇ
ನೂರು ಪದವ ಚೆಲ್ಲಿ
ಎನ್ನ ಮನವ ಕದ್ದ
ಚೋರಿ ನೀನು.

ದುಂಡು ಮೊಗದ
ಮಲ್ಲಿಗೆ ಮೊಗ್ಗು
ನೀ
ಮುನಿದರೂ ಬರೀ
ಕೆಂಡ ಸಂಪಿಗೆ.

ಹೂವ ಕಂಡು
ಮರುಳುಗೊಂಡೆ
ಮನದ ತುಂಬ
ನಿನ್ನ ಪರಿಮಳ
ತುಂಬಿಕೊಂಡೆ

Thursday, January 15, 2009

ಜೋಗುಳದಿಂದ- 3



ಮನದ ಬನದ
ತುಂಬೆಲ್ಲ ನಿನ್ನದೇ
ಕನಸುಗಳು.
ಕಣ್ಣ ಕೊಳದೊಳಗೆ
ಬರಿ ನಿನ್ನದೇ
ಚಿತ್ರಗಳು.

ಮಾತ ಮರೆತು
ಮೌನ ಉಲಿಯುತಿಹುದು
ಉಸಿರ ಮರೆತು
ಮನವು ಮಿಡಿಯುತಿಹುದು ನಿನಗಾಗಿ.
ಕಣ್ಣಲಿ ಕಣ್ಣಿಟ್ಟು
ಒಮ್ಮೆ ನೋಡಿದರೆ
ಅಷ್ಟು ಸಾಕು
ನಮ್ಮ ಪ್ರೆಮ ಪರ್ವದ
ನಾಂದಿಗೆ.

Monday, January 12, 2009

ಜೋಗುಳದಿಂದ- 2



ಸ್ನೇಹ ಚಿಗುರಿ
ಪ್ರೀತಿ ಬಲಿಯುವ ಮುನ್ನ
ಹಾಗೆ ಮಾಯವಾದೆ
ಏಕೆ ನನ್ನ ನಲ್ಲೆ.

ನನ್ನ ಕನಸ ಮಹಲಿನಲ್ಲಿ
ರಾಣಿಯಿಲ್ಲದ ರಾಜ ನಾನು
ಉರುಳುತಿರುವುದು
ದಿನವೂ, ಮಹಲೂ
ಬರೀ ನಿನ್ನ ನೆನಪಿನಲ್ಲೇ.

Tuesday, January 6, 2009

ಜೋಗುಳದಿಂದ- 1


ಏಕೋ ಕಾಣೆ
ಮನವು ಗುನುಗುತಿರುವುದು
ಸದಾ ನಿನ್ನ ಹೆಸರ
ಎದುರಿಗಿರಲು ನೀನು
ಹೇಳಲಾರದೆ ಕಾಡುತಿರುವುದು
ಮನವ.

ಕಾಯುತಿರುವೆ ನಾನು
ಮೌನ ಮಾತಾಗುವ
ದಿನವನು
ನಿನ್ನ ಎದೆಯೊಳಗೆ
ನಾ ಸೇರುವ
ಕ್ಷಣವನು

Saturday, August 30, 2008

ಓ ಪ್ರಾಣ ಸಖಿ..



ದೂರದೂರಿನಲಿ
ಹಸಿರ ಮೌನದಲಿ
ಬಾಳ ಹಾದಿ ಕಂಡೆ
ಸುಂದರ ಸುಮಧುರ
ಜೀವನಯಾನಕೆ
ನೀನೇ ಜೊತೆ ನನಗೆಂದೆ.

ಪ್ರೇಮ ಕಾವ್ಯ ಬರೆಯಲು
ನಿನ್ನ ನೋಟ ರಾಗವಾಗಿ
ಎದೆಯ ಮಿಡಿತ ತಾಳವಾಗಿ
ಅಲೆ ಅಲೆಯಾಗಿ ತೇಲಿ ಬಂದು
ಮೌನ ಗೀತೆ ಮಿಡಿಸಿ
ನಡೆವ ಹಾದಿಗೆ ಒಲವ ಮತ್ತೇರಿತು.

ಮನದ ಮಂದಿರದ
ಮಂದಾರ ನೀನು
ಕಂಪ ಮರೆತು ಉಳಿದೆ
ಎದೆಯ ಗುಡಿಯಲ್ಲಿ
ಪ್ರೇಮ ದೀಪವನು ಬೆಳಗಿ
ನೀನೆತ್ತ ನಡೆದೆ.

ಪ್ರೀತಿ ಹಸಿವು
ಹಂಬಲಿಸಿ ಒಡಲಿನಲಿ
ಬಳಲಿ ಬೆಂಡಾಗಿ ಕಾಡಿದೆ
ತುಂಬಿ ನನ್ನೊಳಗೆ
ನಿನ್ನ ತಿಳಿಬಿಂಬ
ಕ್ಷಣವು ಯುಗವಾಗಿ ಕಾಡಿದೆ.

ಮನದ ಮಹಲು
ನನಸಾಗಿ ತಳೆದಿರಲು
ನೀ ಇರದೆ ಈ ಬಾಳ್ವೆಯು
ಮಡಿಲ ತೊಟ್ಟಿಲಲಿ
ಮಗುವು ಉಲಿಯದೆ
ಇದು ಬರಿಯೆ ಚಿತ್ರಪಟವು.

ಉಸಿರ ಮರೆತು ನೀನಿರುವುದೆಂತು
ಕನಸ ಕಳೆದು ನಾನಿರುವುದೆಂತು
ಜೀವ ಸಖಿ ಓ ಪ್ರಾಣ ಸಖಿ
ಕಸುವು ತಂಬಿ
ತುಂ ತುಂಬಿ ತುಂಬಿ ಬಾ
ಎದೆಯ ತಣಿಸೆ
ತುಂ ತುಂಬಿ ತುಂಬಿ ಬಾ
ಜೀವ ಸಖಿ ಓ ಪ್ರಾಣ ಸಖಿ.

ಮನವಿ

ನಡೆವ ಹಾದಿಯಲಿ
ನೀ ಜೊತೆ ಸೇರಲು
ಈ ಬಾಳು ಸುಮಧುರ.
ರೆಪ್ಪೆಯೊಳಗೆ
ನೀ ಮೂಡಿರಲು
ಮಾತೇ ಮರೆತಿಹುದು ನನ್ನಧರ.

ಈ ಎದೆಯು ಹಸಿದಿರಲು
ಪ್ರೀತಿಯ ತುತ್ತನುಣಿಸದೆ
ಮರೆಯಾಗುವೆಯೇತಕೆ
ಓ ಪ್ರೇಮ ದೀಪಿಕೆ.
ಮನವು ನಿನ್ನ
ನೆನಪಿನಲ್ಲೆ
ಕಳೆಯುತಿಹುದು ಕ್ಷಣ ಕ್ಷಣವನು.

ನೀನು ಉಸಿರ ಮರೆತರೆ
ಇರುವನೆಂತು ನಿನ್ನಿನಿಯನು.
ಒಡಲಿನೊಳಗೆ ನೂರು ಕನಸ
ಹೊತ್ತದೆಂತು ಮಲಗಿಹೆ
ಹೀಗೆ ನೀನು ಸುಮ್ಮನೆ.

ಏಕೋ ಕಾಣೆ
ಮನ ಬಯಸಿಹುದು
ನಿನ್ನ ಮಡಿಲನು
ನಮ್ಮ ನಾವೇ ಮರೆವ ಸುಖವನು.

ನಿನ್ನ ಮೌನ
ತೊರೆಯಬಾರದೆ
ಬರುವೆಯೆಂದು ಹೇಳಬಾರದೆ
ನಮ್ಮ ಕನಸ ಮಹಲಿಗೆ.