Friday, March 21, 2008

ಚಂದಿರನ ರಾತ್ರಿಗಳು....

ಪ್ರತಿದಿನ ಸೂರ್ಯ ಬಾನಿನಿಂದ ಜಾರಿ ಮುಳುಗು ಹಾಕುವ ಸಮಯ, ಬೆಳಕನ್ನು ಕತ್ತಲು ನುಂಗಿ ಹಾಕುವ ಸಮಯ. ಬಾನಿನಲ್ಲಿ ನಕ್ಷತ್ರಗಳು ಮಿನುಗುತ್ತಿದ್ದರೆ, ನನ್ನ ಕಲ್ಪನೆಗಳು, ಪ್ರಶ್ನೆಗಳು ಚುಕ್ಕಿಗಳಾಗಿ ಮನಸ್ಸನ್ನು ಆವರಿಸಿ ಬಿಟ್ಟಿರುತ್ತದೆ. ಚಂದಿರನ ಆ ಮಂದವಾದ ಬೆಳ್ಳಿ ಬೆಳಕು ನನ್ನನ್ನು ನಿಧಾನವಾಗಿ ಅವನತ್ತ ಸೆಳೆಯುತ್ತದೆ. ನನಗೆ ನಾನೇ ತಿಳಿಯದಂತೆ ಚಂದಿರನ ಜೊತೆ ನನ್ನ ಮನಸು ಹರಟ ತೊಡಗುತ್ತದೆ.

ಅಲ್ಲಿ ನನ್ನ ಮುಂದಿರುವ ದಿನಗಳು ಮೆಲ್ಲಮೆಲ್ಲನೆ ರೂಪ ಪಡೆಯುತ್ತದೆ. ಬೆಳದಿಂಗಳ ಲೋಕ ಕವನಗಳಾಗಿ ಮನಸ ತುಂಬೆಲ್ಲಾ ಓಡಾಡುತ್ತದೆ. ಬರೆಯಲು ಕುಳಿತರೆ ಬಲೆ ಇಲ್ಲದೆ ಮೀನನ್ನು ಹಿಡಿಯಲು ಹೊರಟಂತೆ, ನುಣುಚಿ ಹೋಗಿ ನನ್ನನ್ನು ಆಟವಾಡಿಸುತ್ತದೆ. ಸುಸ್ತಾಗಿ ಛೆ! ಅಂದುಕೊಂಡು ಕೃತಕ ಬೆಳಕಿನಡಿಗೆ ಪುಸ್ತಕಗಳಿಗಾಗಿ, ಹರಟೆ ಹೊಡೆಯಲು ಹೊಟ್ಟೆ ತುಂಬಿಸಲು ಹೋಗಿ ಬಿಡುತ್ತೇನೆ.

ಸಂಜೆ ಬಾನಿನಲ್ಲಿ ಮೂಡಿದ ನಕ್ಷತ್ರಗಳು ಸದ್ದಿಲ್ಲದೆ ನನ್ನ ಮನಸಿನಲ್ಲಿ ಕುಳಿತಿರುತ್ತದೆ. ಮತ್ತೆ ಚಂದಿರನ ಜೊತೆ ಮಾತಿಗೆ ಕುಳಿತರೆ ಹೊತ್ತು ಹೋದ್ದದ್ದು ತಿಳಿಯುವುದಿಲ್ಲ. ಬೆಳಕು ಹರಿಯುವ ವರೆಗೂ ನಿದ್ದೆ ಹತ್ತುವುದೇ ಇಲ್ಲ. ಮತ್ತೆ ಸಂಜೆಗಾಗಿ ಮನಸು ಕಾಯುತ್ತಿರುತ್ತದೆ..